07 October 2009

‘ಬೆಂಗಳೂರು ಸೆಂಟ್ರಲ್’ ಕಟ್ಟಡ ಸಮುಚ್ಛಯದ ಅಡುಗೆ ಕೊಠಡಿಯಲ್ಲಿ ಬೆಂಕಿ

ಬೆಂಗಳೂರು: ನಗರದ ಮೆಯೊ ಹಾಲ್ ಸಮೀಪದ ‘ಬೆಂಗಳೂರು ಸೆಂಟ್ರಲ್’ ವಾಣಿಜ್ಯ ಸಮುಚ್ಚಯ ಕಟ್ಟಡದ ಮೇಲ್ಭಾಗದಲ್ಲಿ ನಿರ್ಮಿಸಿದ್ದ ಅಡುಗೆ ಕೊಠಡಿಯಲ್ಲಿ ಮಂಗಳವಾರ ರಾತ್ರಿ ಅಗ್ನಿ ಅನಾಹುತ ಸಂಭವಿಸಿದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾದವು.ಕಟ್ಟಡದ ಕೊನೆಯ ಅಂತಸ್ತಿನಲ್ಲಿರುವ ಅಡುಗೆ ಕೋಣೆಯಲ್ಲಿ ರಾತ್ರಿ 6.30ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಆತಂಕಗೊಂಡ ಗ್ರಾಹಕರು ಹಾಗೂ ಸಿಬ್ಬಂದಿ ಪ್ರಾಣ ಭಯದಿಂದ ಓಡಲಾರಂಭಿಸಿ, ನೂಕು ನುಗ್ಗಲು ಉಂಟಾಗಿ ಹಲವರು ಗಾಯಗೊಂಡರು. ವಾಣಿಜ್ಯ ಸಮುಚ್ಚಯದ ಸಿಬ್ಬಂದಿ ಕಟ್ಟಡದ ಬಾಗಿಲುಗಳನ್ನು ಮುಚ್ಚಿದರಿಂದ ಗ್ರಾಹಕರು ಮತ್ತಷ್ಟು ಆತಂಕಕ್ಕೀಡಾದರು. ಕ್ಷಣ ಮಾತ್ರದಲ್ಲಿ ಕಟ್ಟಡದ ತುಂಬಾ ದಟ್ಟ ಹೊಗೆ ಆವರಿಸಿದ್ದರಿಂದ ಗ್ರಾಹಕರಿಗೆ ಉಸಿರಾಡಲು ತೊಂದರೆಯಾಯಿತು. ಅಗ್ನಿಶಾಮಕ ಸಿಬ್ಬಂದಿ ಆರು ವಾಹನಗಳಲ್ಲಿಬಂದು ಬೆಂಕಿ ನಂದಿಸಿ ಒಳಗಿದ್ದವರನ್ನು ಸುರಕ್ಷಿತವಾಗಿ ಹೊರಗೆ ಕರೆತಂದರು. ‘ವಿದ್ಯುತ್ ಶಾರ್ಟ್ ಸರ್ಕಿಟ್ ಅಥವಾ ಅಡುಗೆ ಕೊಠಡಿಯಲ್ಲಿ ಉರಿಯುತ್ತಿದ್ದ ಸ್ಟೌಗಳಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಅಗ್ನಿ ಅನಾಹುತದಲ್ಲಿ ಸಂಭವಿಸಿರುವ ನಷ್ಟದ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ’ ಎಂದು ಅಗ್ನಿಶಾಮಕ ಮತ್ತು ತುರ್ತುಸೇವೆ ಇಲಾಖೆ ನಿರ್ದೇಶಕ ಬಿ.ಜಿ.ಚಂಗಪ್ಪ ಮಾಹಿತಿ ನೀಡಿದರು.ಕಾನೂನು ಬಾಹಿರ:ಪರಿಶೀಲನೆ ನಡೆಸಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅಗ್ನಿಶಾಮಕ ಮತ್ತು ತುರ್ತುಸೇವೆ ಇಲಾಖೆಯ ಐಜಿಪಿ ಪಿ.ಎಸ್.ಸಂದು ಅವರು ‘ಕಾನೂನು ಉಲ್ಲಂಘಿಸಿ ಆರನೇ ಅಂತಸ್ತಿನಲ್ಲಿ ಅನಧಿಕೃತವಾಗಿ ಅಡುಗೆ ಕೊಠಡಿ ನಿರ್ಮಾಣ ಮಾಡಲಾಗಿದೆ’ ಎಂದು ಹೇಳಿದರು.

1 comment: